ನವಾಬರು, ಬಂಗಾಲದ -
18, 19ನೆಯ ಶತಮಾನಗಳಲ್ಲಿ ಬಂಗಾಲವನ್ನು ಆಳುತ್ತಿದ್ದ ಮುಸ್ಲಿಂ ಪ್ರಭುಗಳು. ಮೊಗಲ್ ಚಕ್ರವರ್ತಿ ಔರಂಗ್‍ಜೇóಬ್ 1705ರಲ್ಲಿ ಮುರ್ಷಿದ್ ಕುಲೀ ಖಾನನನ್ನು (1703-1727) ಬಂಗಾಲದ ರಾಜ್ಯಪಾಲನಾಗಿ ನೇಮಿಸಿದ. ಈತ ಬಲಿಷ್ಠನೂ ದಕ್ಷನೂ ಆದ ಆಡಳಿತಗಾರನಾಗಿದ್ದ. ಈತ ಢಾಕಾದಿಂದ ಮುರ್ಷಿದಾಬಾದಿಗೆ ರಾಜಧಾನಿಯನ್ನು ಬದಲಾಯಿಸಿದನಲ್ಲದೆ, ಆ ವೇಳೆಗೆ ಬಂಗಾಲದಲ್ಲಿ ಪ್ರಭಾವ ಬೆಳೆಸಿಕೊಳ್ಳುತ್ತಿದ್ದ ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿಯ ನೌಕರರು ಅತಿಯಾಗಿ ವರ್ತಿಸದಂತೆ ಕ್ರಮ ಕೈಗೊಂಡ. 1727ರಲ್ಲಿ ಕುಲೀ ಖಾನ್ ತೀರಿಕೊಂಡಾಗ ಅವನ ಸ್ಥಾನಕ್ಕೆ ಅವನ ಅಳಿಯ ಶೂಜಾ-ಉದ್-ದೀನ್ ಖಾನ್ (1727-1739) ಬಂದ. ಇವನ ಕಾಲದಲ್ಲಿ ಬಿಹಾರ ಸುಭಾ ಇವನ ಆಡಳಿತದ ವ್ಯಾಪ್ತಿಗೆ ಒಳಪಟ್ಟಿತು. ಶೂಜಾ-ಉದ್-ದೀನ್ 1739ರಲ್ಲಿ ಮರಣ ಹೊಂದಿದ. 

ಶೂಜಾ-ಉದ್-ದೀನನ ಅನಂತರ ಅಧಿಕಾರಕ್ಕೆ ಬಂದ ಅವನ ಮಗ ಸರ್ಫರಾಜ್ ಖಾನ್ (1730-1740) ಬಹಳ ಕಾಲ ಆಡಳಿತ ನಡೆಸಲಿಲ್ಲ. ಒಳಜಗಳ ಮತ್ತು ದಂಗೆಗಳು ಸಾಮಾನ್ಯವಾಗಿದ್ದವು. ಲಂಚಗುಳಿತನ ಮತ್ತು ಅದಕ್ಷತೆಯಿಂದ ರಾಜ್ಯ ಜರ್ಜರಿತವಾಗಿತ್ತು. ಬಂಗಾಲದ ಸಹಾಯಕ ರಾಜ್ಯಪಾಲನಾಗಿದ್ದ ಅಲಿವರ್ದಿ ಖಾನ್ (1740-1756) ತನ್ನ ಸೋದರ ಹಾಜಿ ಅಹಮದ್, ಅಲಮ್ ಚಂದ್, ಜಗತ್ ಸೇಠ್ ಫತೇ ಚಂದ್ ಇವರೊಂದಿಗೆ ಸರ್ಫರಾಜ್ ಖಾನನ ವಿರುದ್ಧ ಪಿತೂರಿ ಹೂಡಿ ಆತನನ್ನು ಕೊಂದು ಬಂಗಾಲದ ಸಿಂಹಾಸನವನ್ನು ಆಕ್ರಮಿಸಿಕೊಂಡ. ಅಲಿವರ್ದಿ ಖಾನ್ ದಕ್ಷನೂ ಪ್ರಭಾವಶಾಲಿಯೂ ಆಗಿದ್ದು ಬಂಗಾಲದ ಮೇಲೆ ತನ್ನ ಹತೋಟಿಯನ್ನು ಸ್ಥಾಪಿಸಲು ಮೊಗಲ್ ಸಾರ್ವಭೌಮನ ಅನುಮತಿ ಪಡೆದುಕೊಂಡ. ಈತ ಇಂಗ್ಲಿಷರ ಬಗ್ಗೆ ಬಿಗಿ ನೀತಿ ಅನುಸರಿಸಿದ. ಆದರೆ ಮರಾಠರು ಇವನಿಗೆ ಕಿರುಕುಳ ಕೊಡುತ್ತಿದ್ದರು. ಮರಾಠರೊಂದಿಗೆ ಶಾಂತಿಯನ್ನೇರ್ಪಡಿಸಿಕೊಳ್ಳಲು ಈತ ವರ್ಷಕ್ಕೆ 12 ಲಕ್ಷ ರೂಪಾಯಿಗಳನ್ನು ಒರಿಸ್ಸಾದ ಒಂದು ಭಾಗದ ಆದಾಯವನ್ನೂ ವಹಿಸಿಕೊಡುವುದಾಗಿ ಒಪ್ಪಂದ ಮಾಡಿಕೊಂಡ (1751).

ಆಲಿವರ್ದಿ 1756ರಲ್ಲಿ ಮರಣ ಹೊಂದಿದ. ಅನಂತರ ಈತನ ಮೊಮ್ಮಗ ಮಿಜಾರ್ó ಮುಹಮ್ಮದ್ ಬಂಗಾಲದ ನವಾಬನಾಗಿ ಅಧಿಕಾರಕ್ಕೆ ಬಂದ. ಈತ ನವಾಬ್ ಸಿರಾಜ್-ಉದ್-ದೌಲನೆಂದು (1756-1757) ಹೆಚ್ಚು ಪ್ರಸಿದ್ಧನಾಗಿದ್ದಾನೆ. ಈತನ ಅಲ್ಪಕಾಲದ ಆಡಳಿತ ಬಂಗಾಲದ ಮತ್ತು ಭಾರತದ ಇತಿಹಾಸದಲ್ಲಿ ಮಹತ್ತ್ವಪೂರಿತವಾದ್ದಾಯಿತು.

ಸಿರಾಜ್-ಉದ್-ದೌಲ ಪ್ರಭಾವಯುತ ವ್ಯಕ್ತಿ ಹಾಗೂ ಯೋಗ್ಯ ಆಡಳಿತಗಾರನಾಗಿದ್ದ. ಈತ ಇಂಗ್ಲಿಷರ ಕುತಂತ್ರವನ್ನು ಸಹಿಸುತ್ತಿರಲಿಲ್ಲ. ಅವರು ಅನಾವಶ್ಯಕವಾಗಿ ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಇಂಗ್ಲಿಷರು ಬಂಗಾಲದಲ್ಲಿ ಕೋಟೆಗಳನ್ನು ನಿರ್ಮಿಸುವುದರಲ್ಲಿ ನಿರತರಾಗಿದ್ದುದನ್ನು ಇವನು ವಿರೋಧಿಸಿದ. ಇದರಿಂದ ಇಂಗ್ಲಿಷರೊಂದಿಗೆ ಘರ್ಷಣೆ ಸಂಭವಿಸಿತು. ಈತ 1756ರ ಜೂನ್ 4ರಂದು ಅಪಾರ ಸೈನ್ಯದೊಂದಿಗೆ ಹೊರಟು ಬ್ರಿಟಿಷರ ಕಾಸಿಮ್ ಬಜಾರಿನ ಕಾರ್ಖಾನೆಗಳನ್ನು ವಶಪಡಿಸಿಕೊಂಡು ಯುದ್ಧವನ್ನು ಮುಂದುವರಿಸಿದ. ಜೂನ್ 20ರಂದು ಕಲ್ಕತ್ತ ಇವನ ವಶವಾಯಿತು. ಬ್ರಿಟಿಷ್ ರಾಜ್ಯಪಾಲ ಡ್ರೇಕ್ ಪಲಾಯನ ಮಾಡಿ ಹಡಗಿನಲ್ಲಿ ರಕ್ಷಣೆ ಪಡೆದ. ವಿಲಿಯಂ ಕೋಟೆ ಸುಲಭವಾಗಿ ನವಾಬನ ವಶವಾಯಿತು. ಇವನು ಕಲ್ಕತ್ತೆಯನ್ನು ವಶಪಡಿಸಿಕೊಂಡ ಘಟನೆ ಭಾರತದ ಇತಿಹಾಸದಲ್ಲಿ ಸ್ಮರಣೀಯವಾದ್ದು. ಸಿರಾಜ್-ಉದ್-ದೌಲ 146 ಮಂದಿ ಇಂಗ್ಲಿಷ್ ಕೈದಿಗಳನ್ನು ಒಂದು ಚಿಕ್ಕ ಕೋಣೆಯಲ್ಲಿ (51/2ಮೀ. ಘಿ 4 ಮೀ. ಕೂಡಿ ಹಾಕಿದ್ದನೆಂದೂ ಅವರಲ್ಲಿ 123 ಮಂದಿ ಉಸಿರು ಕಟ್ಟಿ ಸತ್ತುಹೋದರೆಂದೂ ಹಾಲ್‍ವೆಲ್ ಎಂಬುವನು ಬರೆದಿರುವುದು ಕಟ್ಟುಕತೆಯೆಂದು, ಇಲ್ಲವೇ ಉತ್ಪ್ರೇಕ್ಷೆಯೆಂದು ಹೇಳಲು ಸಾಕಷ್ಟು ಆಧಾರಗಳಿವೆ.

ಕಲ್ಕತ್ತದ ಪತನಾಂತರ ಇಂಗ್ಲಿಷರ ನವಾಬನ ಶತ್ರುಗಳೊಂದಿಗೆ ಸಂಧಾನದಲ್ಲಿ ತೊಡಗಿದರು. ಇವರು ತಮ್ಮ ಇಚ್ಛೆಯಂತೆ ವರ್ತಿಸುವಂಥ ಬೇರೊಬ್ಬನನ್ನು ಸಿರಾಜ್-ಉದ್-ದೌಲನ ಸ್ಥಾನದಲ್ಲಿ ನವಾಬನನ್ನಾಗಿ ಮಾಡಲು ಯೋಚಿಸುತ್ತಿದ್ದರು. ನವಾಬನ ದಂಡನಾಯಕನಾಗಿದ್ದ ಮೀರ್ ಜಾಫರನನ್ನು (1737-1760) ಬಂಗಾಲದ ನವಾಬನನ್ನಾಗಿ ಮಾಡಲು ಸಂಚು ಹೂಡಲಾಯಿತು. ಸಿರಾಜ್-ಉದ್-ದೌಲ ತನ್ನ ದಂಡನಾಯಕನಲ್ಲಿ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದುದರಿಂದ ತನ್ನ ವಿರುದ್ಧವಾದ ಪಿತೂರಿಯ ಬಗ್ಗೆ ಅರಿವಿಲ್ಲದವನಾಗಿದ್ದ. ಇಂಗ್ಲಿಷರು ಆಕ್ರಮಣದಲ್ಲಿ ತೊಡಗಿ ಪ್ಲಾಸಿ ಎಂಬಲ್ಲಿಗೆ ಮುಂದುವರಿದರು. ಮೀರ್ ಜಾಫರ್ ಆತುರಾತುರವಾಗಿ ಸೈನ್ಯದೊಂದಿಗೆ ಯುದ್ಧಭೂಮಿಗೆ ನಡೆದ. ಸೈನ್ಯದ ಎಲ್ಲ ಅಧಿಕಾರಿಗಳೊಂದಿಗೆ ಮಾಡಿಕೊಂಡಿದ್ದ ಪೂರ್ವಯೋಜಿತ ಸಂಚಿನಂತೆ ಇಂಗ್ಲಿಷರು ಯಾವುದೇ ಪ್ರತಿಭಟನೆಯನ್ನು ಎದುರಿಸಬೇಕಾಗಿ ಬರಲಿಲ್ಲ. ಇಂಗ್ಲಿಷರು ಜಯಶೀಲರಾದರು. ಮೀರ್ ಜಾಫರನನ್ನು ಬಂಗಾಲದ ನವಾಬನಾಗಿ ಘೋಷಿಸಿದರು. ಸೆರೆ ಸಿಕ್ಕ ಸಿರಾಜ್-ಉದ್-ದೌಲನನ್ನು ಕೊಲ್ಲಲಾಯಿತು.

ಮೀರ್ ಜಾಫರನೂ ಇಂಗ್ಲಿಷರೊಡನೆ ಹೊಂದಿಕೊಳ್ಳಲಾಗಲಿಲ್ಲ. ಈತ ಡಚ್ಚರೊಡನೆ ಸೇರಿ ಇಂಗ್ಲಿಷರ ವಿರುದ್ಧ ಪಿತೂರಿ ನಡೆಸಿದ. ಆದರೆ ಇಂಗ್ಲಿಷರು ಈತನ ಯೋಜನೆಗಳನ್ನು ನಿಷ್ಫಲಗೊಳಿಸಿ ಇವನನ್ನು ಪದಚ್ಯುತನಾಗಿಸಿ, ಇವನ ಅಳಿಯ ಮೀರ್ ಕಾಸಿಂನನ್ನು 1760ರಲ್ಲಿ ನವಾಬನಾಗಿ ನೇಮಿಸಿದರು. ಇಂಗ್ಲಿಷರು ಹೊಂದಿದ್ದ ಆರ್ಥಿಕ ಸವಲತ್ತುಗಳನ್ನು ಮೀರ್ ಕಾಸಿಂ (1760-1763) ಸಹಿಸಲಾರದಾದ. ಪರಿಣಾಮವಾಗಿ ಬಲುಬೇಗ ಅವರೊಂದಿಗೆ ಘರ್ಷಣೆಗೆ ಎಡೆಮಾಡಿಕೊಂಡ. ಆತ ಬಂಗಾಲವನ್ನು ಕಳೆದುಕೊಂಡು ಅಯೋಧ್ಯೆಗೆ ಬಂದು ಅಲ್ಲಿಯ ನವಾಬ ಶೂಜಾ-ಉದ್-ದೌಲ ಮತ್ತು ಮೊಗಲ್ ಚಕ್ರವರ್ತಿ ಶಾಹ ಆಲಮನೊಂದಿಗೆ ಕೂಡಿಕೊಂಡು, ಇಂಗ್ಲಿಷರಿಂದ ಬಂಗಾಲದ ಸಿಂಹಾಸನವನ್ನು ಪಡೆಯುವ ವಿಚಾರದಲ್ಲಿ ಪಿತೂರಿ ನಡೆಸಿದ. ಇವರು 1764ರಲ್ಲಿ ಬಕ್ಸರ್ ಎಂಬಲ್ಲಿ ಇಂಗ್ಲಿಷರಿಂದ ಪರಾಜಿತರಾದರು. ಮೀರ್ ಕಾಸಿಂ ಪಲಾಯನ ಮಾಡಿದ.

ಮೀರ್ ಕಾಸಿಂನೊಂದಿಗೆ ಯುದ್ಧ ಪ್ರಾರಂಭವಾದ ಕೂಡಲೆ ಇಂಗ್ಲಿಷರು ಮೀರ್ ಜಾಫರನನ್ನು ಮತ್ತೊಮ್ಮೆ (1763-1765) ಬಂಗಾಲದ ನವಾಬನಾಗಿ ಘೋಷಿಸಿ ಆತನಿಂದ ಅನೇಕ ಸವಲತ್ತುಗಳನ್ನು ಪಡೆದುಕೊಂಡರು. ಈತ 1765ರಲ್ಲಿ ಮರಣಹೊಂದಿದ. ಇಂಗ್ಲಿಷರು ಇವನ ಮಗ ನಜ್ಮ್-ಉದ್-ದೌಲನೊಂದಿಗೆ ಒಪ್ಪಂದ ಮಾಡಿಕೊಂಡು, ನವಾಬನಾಗಲು (1765-1766) ಅವನಿಗೆ ಅನುಮತಿ ನೀಡಿದರು. ಈ ಒಪ್ಪಂದದಂತೆ ಪೂರ್ಣ ಆಡಳಿತ ಇಂಗ್ಲಿಷರ ಹತೋಟಿಗೆ ಬಂತು. 1766-1770ರಲ್ಲಿ ಸೈಫ್-ಉದ್-ದೀನ್ ಅಧಿಕಾರದಲ್ಲಿದ್ದ. ಆತನೂ ಕೇವಲ ನಾಮಮಾತ್ರ ನವಾಬನಾಗಿದ್ದ.	
(ಎಸ್.ವೈ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ